ರಾಜ್ಯ ಸುದ್ದಿಗಳು :
ಮುಂಬೈ-ಹೈದರಾಬಾದ್ ಬುಲೆಟ್ ಟ್ರೈನ್ ಯೋಜನೆ ಕಲ್ಯಾಣ ಕರ್ನಾಟಕಕ್ಕೆ ಹೊಸ ಆಶಾಕಿರಣ
ಈ ಬೃಹತ್ ಯೋಜನೆಯ ಮೊದಲ ಹಂತದ ಸಮೀಕ್ಷೆ ನಡೆಸಿದೆ
ರಾಷ್ಟ್ರೀಯ ಹೈ-ಸ್ಪೀಡ್ ರೈಲು ಕಾರ್ಪೊರೇಷನ್ ಲಿಮಿಟೆಡ್ ವತಿಯಿಂದ ಸುಮಾರು 2 ಲಕ್ಷ ಕೋಟಿ ರೂಪಾಯಿ ವೆಚ್ಚದಲ್ಲಿ ಮುಂಬೈ ಮತ್ತು ಹೈದರಾಬಾದ್ ನಡುವೆ ನಿರ್ಮಾಣವಾಗಲಿರುವ 671 ಕಿ.ಮೀ ಉದ್ದದ ಪ್ರತಿಷ್ಠಿತ ಬುಲೆಟ್ ಟ್ರೈನ್ ಯೋಜನೆಗೆ ಅಂತಿಮ ಕ್ರಿಯಾಯೋಜನೆ ಸಿದ್ಧಗೊಂಡಿದ್ದು, ಕಲ್ಯಾಣ ಕರ್ನಾಟಕದ ಕಲಬುರಗಿ (ತಾಜಸುಲ್ತಾನ್‌ಪುರ) ಮೂಲಕ ಹಾದುಹೋಗುವ ಈ ಹೈಸ್ಪೀಡ್ ರೈಲು ಮಾರ್ಗವು ವಾಣಿಜ್ಯ ಮತ್ತು ಮಾಹಿತಿ ತಂತ್ರಜ್ಞಾನ ನಗರಿಗಳ ನಡುವಿನ ಪ್ರಯಾಣದ ಸಮಯವನ್ನು ಕೇವಲ 3 ಗಂಟೆಗಳಿಗೆ ತಗ್ಗಿಸಿ ಈ ಭಾಗದ ಸಾಮಾಜಿಕ ಹಾಗೂ ಆರ್ಥಿಕ ಪ್ರಗತಿಗೆ ಹೊಸ ವೇಗ ನೀಡಲಿದೆ.
------------------------------
ರಾಜ್ಯದಲ್ಲಿ ಬರಗಾಲ ಎದುರಿಸಲು ಸರ್ಕಾರದ ತುರ್ತು ಸಿದ್ಧತೆ,
ಮುಂಗಾರು ಮಳೆಯ ತೀವ್ರ ಕೊರತೆ
ಪ್ರಸಕ್ತ ಸಾಲಿನಲ್ಲಿ ದೇಶ ಹಾಗೂ ರಾಜ್ಯದಾದ್ಯಂತ ನೈಋತ್ಯ ಮುಂಗಾರು ಮಳೆ ಗಣನೀಯವಾಗಿ ಕುಂಠಿತಗೊಂಡಿರುವುದರಿಂದ ಜಲಾಶಯಗಳಲ್ಲಿ ನೀರಿನ ಮಟ್ಟ ಕುಸಿದಿದ್ದು, ಬರಗಾಲದ ಭೀತಿಯನ್ನು ಎದುರಿಸಲು ಮತ್ತು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲು ಸರ್ಕಾರವು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದೆ.
ಪ್ರಸಕ್ತ ವರ್ಷದ ಆರಂಭದಲ್ಲಿ ನೈಋತ್ಯ ಮುಂಗಾರು ಮಾರುತಗಳು ತೀವ್ರವಾಗಿ ದುರ್ಬಲಗೊಂಡಿರುವುದು ಆತಂಕಕ್ಕೆ ಕಾರಣವಾಗಿದೆ. ಜೂನ್ ತಿಂಗಳ ಮೊದಲಾರ್ಧದಲ್ಲಿ ವಾಡಿಕೆಯಂತೆ ಸುರಿಯಬೇಕಿದ್ದ ಮಳೆಯಲ್ಲಿ ಭಾರಿ ಕುಸಿತ ಕಂಡುಬಂದಿದ್ದು, ಕರ್ನಾಟಕ ರಾಜ್ಯದಲ್ಲಿ ಶೇಕಡಾ 21 ರಷ್ಟು ಹಾಗೂ ದೇಶದಾದ್ಯಂತ ಒಟ್ಟಾರೆಯಾಗಿ ಶೇಕಡಾ 64 ರಷ್ಟು ಮಳೆಯ ಕೊರತೆ ಎದುರಾಗಿದೆ. ಹವಾಮಾನ ಇಲಾಖೆಯ ಅಂಕಿ-ಅಂಶಗಳ ಪ್ರಕಾರ, ದೇಶದಲ್ಲಿ ಜೂನ್ 4 ರಿಂದ 15 ರ ಅವಧಿಯಲ್ಲಿ ಆಗಬೇಕಿದ್ದ 53 ಮಿಲಿಮೀಟರ್ ಮಳೆಯ ಬದಲಾಗಿ ಕೇವಲ 19 ಮಿಲಿಮೀಟರ್‌ಗಳಷ್ಟು ಮಾತ್ರ ಮಳೆಯಾಗಿದೆ.
------------------------------------------------------------------------------------------------------
ರಾಷ್ಟ್ರೀಯ ಸುದ್ದಿಗಳು :
ಕೆಮ್ಮು ಮತ್ತು ಇತರ ಸಿರಪ್‌ಗಳ ಖರೀದಿಗೆ ವೈದ್ಯರ ಪ್ರಿಸ್ಕ್ರಿಪ್ಷನ್ ಕಡ್ಡಾಯಗೊಳಿಸಲಾಗಿದೆ
ದೇಶದಲ್ಲಿ ದ್ರವರೂಪದ ಔಷಧಿಗಳ ದುರುಪಯೋಗ ತಡೆಯಲು ಕೇಂದ್ರ ಸರ್ಕಾರವು 'ಡ್ರಗ್ಸ್ ಮತ್ತು ಕಾಸ್ಮೆಟಿಕ್ಸ್ ಕಾಯ್ದೆ 1940'ರ ಅಡಿಯಲ್ಲಿ 'ಡ್ರಗ್ಸ್ (ಐದನೇ ತಿದ್ದುಪಡಿ) ನಿಯಮಗಳು, 2026'ನ್ನು ಜಾರಿಗೆ ತಂದಿದ್ದು, ಇನ್ಮುಂದೆ ವೈದ್ಯರ ಅಧಿಕೃತ ಪ್ರಿಸ್ಕ್ರಿಪ್ಷನ್ ಇಲ್ಲದೆ ಕೆಮ್ಮು ಸೇರಿದಂತೆ ಯಾವುದೇ ಸಿರಪ್‌ಗಳನ್ನು ಮಾರಾಟ ಮಾಡುವುದು ಅಥವಾ ಖರೀದಿಸುವುದು ಕಾನೂನುಬಾಹಿರವಾಗುತ್ತದೆ.
----------------------------------
ನೀಟ್ ಮರುಪರೀಕ್ಷೆ ಹಿನ್ನೆಲೆ ದೇಶಾದ್ಯಂತ ಟೆಲಿಗ್ರಾಂ ಆ್ಯಪ್ ಬಳಕೆಗೆ ತಾತ್ಕಾಲಿಕ ಬ್ರೇಕ್ ಹಾಕಲಾಗಿದೆ
ಜೂನ್ 21 ರಂದು ನಡೆಯಲಿರುವ ನೀಟ್-ಯುಜಿ (NEET-UG) ವೈದ್ಯಕೀಯ ಮರುಪರೀಕ್ಷೆಯಲ್ಲಿ ಯಾವುದೇ ರೀತಿಯ ಪ್ರಶ್ನೆಪತ್ರಿಕೆ ಸೋರಿಕೆ ಹಾಗೂ ಅಕ್ರಮಗಳು ನಡೆಯದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯವು ದೇಶಾದ್ಯಂತ ಟೆಲಿಗ್ರಾಂ ಆ್ಯಪ್ ಅನ್ನು ಜೂನ್ 22 ರವರೆಗೆ ತಾತ್ಕಾಲಿಕವಾಗಿ ನಿರ್ಬಂಧಿಸಿದೆ.
-----------------------------------
ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ-6 ಅಂಡಮಾನ್‌ನಲ್ಲಿ ದೇಶದಲ್ಲೇ ಅತ್ಯಂತ ಕನಿಷ್ಠ ಜನನ ಪ್ರಮಾಣ ದಾಖಲು
ಕೇಂದ್ರ ಆರೋಗ್ಯ ಸಚಿವಾಲಯ ಇತ್ತೀಚೆಗೆ ಬಿಡುಗಡೆ ಮಾಡಿದ ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ-6 (NFHS-6) ರ ವರದಿಯ ಪ್ರಕಾರ, ಅಂಡಮಾನ್ ಮತ್ತು ನಿಕೋಬಾರ್ ದ್ವೀಪಸಮೂಹದ ಒಟ್ಟು ಜನನ ಪ್ರಮಾಣವು (TFR) ಕೇವಲ 0.9 ಕ್ಕೆ ತೀವ್ರವಾಗಿ ಕುಸಿಯುವ ಮೂಲಕ ಭಾರತದಲ್ಲೇ ಅತ್ಯಂತ ಕಡಿಮೆ ಜನನ ದರ ಹೊಂದಿರುವ ಹಾಗೂ 'ಒಂದಕ್ಕಿಂತ ಕಡಿಮೆ' TFR ದಾಖಲಿಸಿದ ದೇಶದ ಏಕೈಕ ಪ್ರದೇಶ ಎಂಬ ಆತಂಕಕಾರಿ ಹೆಗ್ಗಳಿಕೆಗೆ ಪಾತ್ರವಾಗಿದೆ.
------------------------------------------------------------------------------------------------------
ಅಂತಾರಾಷ್ಟ್ರೀಯ ಸುದ್ದಿಗಳು :
ಪ್ರಧಾನಿ ಮೋದಿ ಅವರ ಐತಿಹಾಸಿಕ ಸ್ಲೋವಾಕಿಯಾ ಪ್ರವಾಸ ಮತ್ತು ಅತ್ಯುನ್ನತ ನಾಗರಿಕ ಗೌರವ ಸ್ವೀಕಾರ
ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ 12 ವರ್ಷಗಳ ಆಡಳಿತಾವಧಿಯ 100ನೇ ವಿದೇಶಿ ಪ್ರವಾಸದ ಅಂಗವಾಗಿ ಸ್ಲೋವಾಕಿಯಾಗೆ ಭೇಟಿ ನೀಡಿದ ಮೊದಲ ಭಾರತೀಯ ಪ್ರಧಾನಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ ಹಾಗೂ ಅಲ್ಲಿನ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ‘ಆರ್ಡರ್ ಆಫ್ ದಿ ವೈಟ್ ಡಬಲ್ ಕ್ರಾಸ್’ ಗೌರವವನ್ನು ಸ್ವೀಕರಿಸುವ ಮೂಲಕ ದ್ವಿಪಕ್ಷೀಯ ಬಾಂಧವ್ಯದಲ್ಲಿ ಹೊಸ ಮೈಲಿಗಲ್ಲು ಸ್ಥಾಪಿಸಿದ್ದಾರೆ.
ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ತಮ್ಮ ರಾಜತಾಂತ್ರಿಕ ಪ್ರಯಾಣದಲ್ಲಿ ಮಹತ್ತರ ದಾಖಲೆಯೊಂದನ್ನು ಬರೆದಿದ್ದಾರೆ. ಯುರೋಪ್ ಪ್ರವಾಸದಲ್ಲಿರುವ ಅವರು ಇತ್ತೀಚೆಗೆ ಸ್ಲೋವಾಕಿಯಾಗೆ ಭೇಟಿ ನೀಡಿದ್ದು, ಇದು ಅವರ ಕಳೆದ 12 ವರ್ಷಗಳ ಅಧಿಕಾರಾವಧಿಯಲ್ಲಿ ಕೈಗೊಂಡ 100ನೇ ವಿದೇಶಿ ಪ್ರವಾಸವಾಗಿದೆ. ಈ ಅವಧಿಯಲ್ಲಿ ಅವರು ಒಟ್ಟು 78 ದೇಶಗಳಿಗೆ ಭೇಟಿ ನೀಡಿದ್ದು, ಮೊದಲ ಅವಧಿಯಲ್ಲಿ 49, ಎರಡನೇ ಅವಧಿಯಲ್ಲಿ 27 ಮತ್ತು ಮೂರನೇ ಅವಧಿಯಲ್ಲಿ 24 ಬಾರಿ ವಿದೇಶಿ ಯಾನ ಮಾಡಿದ್ದಾರೆ. ವಿಶೇಷವೆಂದರೆ, ಸ್ಲೋವಾಕಿಯಾ ಸ್ವಾತಂತ್ರ್ಯ ಪಡೆದ ನಂತರ ಅಲ್ಲಿಗೆ ಭೇಟಿ ನೀಡಿದ ಮೊದಲ ಭಾರತೀಯ ಪ್ರಧಾನಿ ಎಂಬ ಕೀರ್ತಿಗೂ ಇವರು ಭಾಜನರಾಗಿದ್ದಾರೆ.
------------------------------------
ಬ್ರಿಟನ್‌ನಲ್ಲಿ 16 ವರ್ಷದೊಳಗಿನ ಮಕ್ಕಳಿಗೆ ಸಾಮಾಜಿಕ ಜಾಲತಾಣಗಳ ನಿಷೇಧ
ಆಸ್ಟ್ರೇಲಿಯಾ, ಕೆನಡಾ ಮತ್ತು ಮಲೇಷ್ಯಾ ದೇಶಗಳ ಮಾದರಿಯಲ್ಲೇ, ಬ್ರಿಟನ್ ಪ್ರಧಾನಿ ಕೀರ್ ಸ್ಟಾರ್ಮರ್ ಅವರು 16 ವರ್ಷದೊಳಗಿನ ಮಕ್ಕಳಿಗೆ ಸಾಮಾಜಿಕ ಜಾಲತಾಣಗಳ ಬಳಕೆಯನ್ನು ಕಡ್ಡಾಯವಾಗಿ ನಿಷೇಧಿಸುವುದಾಗಿ ಘೋಷಿಸಿದ್ದು, ಮಕ್ಕಳ ಮಾನಸಿಕ ನೆಮ್ಮದಿ ಮತ್ತು ಆನ್‌ಲೈನ್ ಸುರಕ್ಷತೆಯ ವಿಷಯದಲ್ಲಿ ಯಾವುದೇ ರಾಜಿ ಮಾಡಿಕೊಳ್ಳದೆ, ತಂತ್ರಜ್ಞಾನ ಕಂಪನಿಗಳ ವಿರೋಧದ ನಡುವೆಯೂ ಈ ಕಠಿಣ ಕಾನೂನನ್ನು ಜಾರಿಗೊಳಿಸಲು ಬದ್ಧರಾಗಿದ್ದಾರೆ
-----------------------------------------------------------------------------------------------------

No comments:
Post a Comment